ಕ್ವಿಟ್ ಇಂಡಿಯಾ ದಿನಾಚರಣೆ

 ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಎರಡು ಪ್ರಮುಖ ಹೆಜ್ಜೆ ಗುರುತುಗಳಿವೆ. ಮೊದಲನೆಯದು 1857ರ ಸಿಪಾಯಿ ದಂಗೆ. ಎರಡನೆಯದು 1942ರ ಕ್ವಿಟ್‌ ಇಂಡಿಯಾ(ಭಾರತ ಬಿಟ್ಟು ತೊಲಗಿ) ಆಂದೋಲನ. ದೇಶದ ಸ್ವಾತಂತ್ರ್ಯ ವೀರರು 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' (ಕ್ವಿಟ್ ಇಂಡಿಯಾ) ಎಂಬುದಾಗಿ ಅಂತಿಮ ತಾಕೀತು ನೀಡಿದ ದಿನ 1942ರ ಆಗಸ್ಟ್ 9. ಮಹಾತ್ಮಾ ಗಾಂಧಿ ನೇತೃತ್ವದ ಚಳವಳಿಕಾರರು ಮುಂಬಯಿಯಲ್ಲಿ ಈ ಘೋಷಣೆ ನಡೆಸಿದರು.

ಅಂದು ತ್ರಿವರ್ಣ ಪತಾಕೆಯಡಿ ಎಲ್ಲಾ ಚಳವಳಿಕಾರರೂ ಒಗ್ಗೂಡಿ, ದೇಶದಿಂದ ಪರಕೀಯರನ್ನು ಮೂಲೋತ್ಪಾಟಿಸಲು ಸಿದ್ಧರಾದ ಮಹತ್ವದ ದಿನವದು.

ಬ್ರಿಟಿಷರನ್ನು ಸಂಧಾನಕ್ಕೆ ಕರೆ ತರುವ ಗುರಿಯೊಂದಿಗೆ ಗಾಂಧೀಜಿ ಅವರು ಸಹನಶೀಲ ಪ್ರತಿರೋಧವನ್ನು ತೋರಿಸುವಂತೆ ಜನರಿಗೆ ಕರೆ ನೀಡಿದರು. ಮುಂಬೈಯ ಗೊವಾಲಿಯ ಮೈದಾನದಲ್ಲಿ 1942ರ ಆಗಸ್ಟ್ 8ರಂದು ಚಾಲನೆ ನೀಡಿದ ಈ ಹೋರಾಟಕ್ಕೆ 'ಮಾಡು ಇಲ್ಲವೇ ಮಡಿ' ಎಂಬ ಘೋಷಣಾ ವಾಕ್ಯವನ್ನು ನೀಡಿದರು. ಅಂದಿನಿಂದ ಈ ಮೈದಾನಕ್ಕೆ ಆಗಸ್ಟ್ ಕ್ರಾಂತಿ ಮೈದಾನ ಎಂದು ಮರು ನಾಮಕರಣ ಮಾಡಲಾಯಿತು.

ಗಾಂಧಿಯವರ ಅಮೋಘವಾದ ಸತ್ವಯುತ ದೇಶಭಕ್ತಿಯ ಭಾಷಣದ ನಂತರ, ಹಲವಾರು ಕಾಂಗ್ರೆಸ್ ನಾಯಕರನ್ನು ಬಂಧಿಸಲಾಯಿತು. ಗಾಂಧೀಜಿಯವರನ್ನು ಪುಣೆಯ ಆಗಾಖಾನ್ ಅರಮನೆಯಲ್ಲಿ ಗೃಹ ಬಂಧನದಲ್ಲಿರಿಸಲಾಯಿತು. ಇದು ಕ್ವಿಟ್ ಇಂಡಿಯ ಚಳವಳಿಯನ್ನು ಮತ್ತಷ್ಟು ಬಲಗೊಳಿಸಿತು.

ಚಳುವಳಿಯ ತೀಕ್ಷ್ಣತೆಯನ್ನು ಅರಿತ ಬ್ರಿಟಿಷರು, ಬಹುತೇಕ ಪ್ರಮುಖ ನಾಯಕರನ್ನು ಸೆರೆಮನೆಗೆ ಹಾಕಿದ್ದರಿಂದಾಗಿ ನಾಯಕರಿಲ್ಲದೆಯೇ ಚಳುವಳಿ ಉಗ್ರ ಸ್ವರೂಪವನ್ನು ಕಂಡದ್ದು ಈ ಚಳುವಳಿಯ ಹೆಗ್ಗಳಿಕೆ. ಇಡೀ ದೇಶದಲ್ಲಿ ಕ್ರಾಂತಿಯ ಅಲೆ ಎದ್ದಿತು. ಕ್ವಿಟ್ ಇಂಡಿಯ ಚಳುವಳಿಗೆ ಭಾರಿ ಸಂಖ್ಯೆಯ ಬೆಂಬಲ ವ್ಯಕ್ತವಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನಸ್ತೋಮ ನೆರೆಯಲಾರಂಭಿಸಿ ಹೊಸ ತಿರುವನ್ನು ಕಂಡಿತು. ದೇಶದ ಮೂಲೆ ಮೂಲೆಯಲ್ಲೂ ಈ ಘೋಷಣೆಯು ಜನರನ್ನುಬಡಿದೆಬ್ಬಿಸಿತು.

ಅರುಣಾ ಅಸಫ್ ಅಲಿ ಹಾಗೂ ಸುಚೇತ ಕೃಪಲಾನಿಯವರು ಚಳವಳಿಯ ಮುಂದಾಳತ್ವವನ್ನು ವಹಿಸಿಕೊಳ್ಳುವುದರೊಂದಿಗೆ ಯುವಕರು ಹೆಚ್ಚೆಚ್ಚು ಸಕ್ರಿಯರಾಗಲಾರಂಭಿಸಿದರು. ಕೃಷಿಕರು ಬಹು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಈ ಚಳವಳಿಯ ಬಹು ಮುಖ್ಯ ಅಂಶವಾಗಿತ್ತು.

ಬ್ರಿಟಿಷರ ದಬ್ಬಾಳಿಕೆಯು ದೇಶದ ಜನರ ಕಣಕಣದಲ್ಲೂ ರಕ್ತ ಕುದಿಯುವಂತೆ ಮಾಡಿತ್ತು ಎಂಬುದಕ್ಕೆ ಸಾಕ್ಷಿಯಾದ ಘಟನೆ ಕ್ವಿಟ್ ಇಂಡಿಯಾ ಆಂದೋಲನ. ಕ್ವಿಟ್ ಇಂಡಿಯ ಚಳವಳಿಯ ಜ್ವಾಲೆಗಳು ಬ್ರಿಟಿಷ್ ಆಡಳಿತದ ಬುಡ ಹತ್ತಿ ಉರಿಯಲಾರಂಭಿಸಿತು. ಅದರ ಕಾವಿನ ಪರಿಣಾಮವೇ ಐದು ವರ್ಷದ ಬಳಿಕ ನಾವು 1947ರ ಆಗಸ್ಟ್ 15ರಂದು ಗಳಿಸಿದ ಸ್ವಾತಂತ್ರ್ಯ